ಕವಿತೆ ಹೀಗಿರಬೇಕು

ಕವಿತೆ

ಕವಿತೆ ಹೀಗಿರಬೇಕು

ಅಭಿಜ್ಞಾ ಪಿ ಎಮ್ ಗೌಡ

Abstract poetry - Toni Popov Art

ಸಂಜೆಯ ಕೆಂಬಾರದಂತೆ
ಲಕಲಕ ಹೊಳೆಯುತ
ಬಾನಾಡಿಗಳ ಚಿಲಿಪಿಲಿ ಇಂಚರದಿ
ಕರ್ಣಕೊಳವನು ತಂಪುಗೊಳಿಸುವಂತೆ
ನೀ ಸಮೃದ್ಧವಾಗಿರಬೇಕು…

ಮುಂಜಾನೆಯ ಅರ್ಕನುದಯಕೆ
ಹೊಂಬೆಳಕನಡಿಯಲಿ ಮಿನುಗೊ
ಧರೆಯೊಡಲ ಸೌಂದರ್ಯದಂತೆ
ನಿತ್ಯ ತಥ್ಯ ಸುಂದರವಾಗಿ
ನೀ ರಾರಾಜಿಸುವಂತಿರಬೇಕು…

ನಸುಕಿನ ಹಿಮಮಣಿಯ ಸಾಲು
ಹಸಿರೆಲೆಯ ಮಾಲೆ ವಿಭಿನ್ನತೆಯ
ರೂಪದರ್ಶನದಂತೆ ಸದಾ
ಓದುಗರ ಮನದಲ್ಲಿ ಅಚ್ಚಳಿಯದೆ
ನೀ ಉಳಿಯುವಂತಿರಬೇಕು….

ಮಯೂರ ನೃತ್ಯದಂತೆ
ಮನದಂಗಳವನು ವೈಭವೀಕರಿಸಿ
ತರುಲತೆಬಳ್ಳಿಗಳ ಬಳುಕು
ನಿನಾದದೊಳು ಹಸಿರುಸಿರ
ಸೂಸುವಂತೆ ನೀ ಮೆರೆಯುತಿರಬೇಕು…..

ಅಕ್ಷರಜಾತ್ರೆಯಲಿ ಪದಪುಂಜಗಳ
ಲಾಲಿತ್ಯದಂತೆ ನವಿರೇಳುತಿದ್ದು
ಸರ್ವಮನ ಸೂರೆಗೊಳ್ಳುತ
ಥಕಧಿಮಿ ತಾ ನಾಟ್ಯದಂತೆ
ನೀ ನಲಿದಾಡುತಿರಬೇಕು….

ಕಣಕಣದಲ್ಲು ಉಸಿರುಸಿರ
ಭಾವದೆಲೆಯ ತಂತಿಯಾಗಿ ಮೀಟಿ
ಸಾನುರಾಗದಲಿ ಲೋಗರ
ಮನಸೆಳೆದು ತುಡಿತದ ಬಂಧವನ್ನು
ನೀ ಗಟ್ಟಿಗೊಳಿಸುವಂತಿರಬೇಕು…

ಕೋಗಿಲೆಯ ಕೂಜನದಂತೆ
ಶ್ರಾವ್ಯಕಲೆಯ ಕಣಜದೊಳಗೆ ನಲಿದು
ಅನುರಾಗದಲೆಯೊಳಗೆ
ಬಂಧುರದ ಬಾಂಧವ್ಯವನು
ನೀ ಭದ್ರಪಡಿಸುವಂತಿರಬೇಕು…

ಮಾನವೀಯತೆಯ ಸಾಕಾರಕೆ
ಹಿಡಿದ ಕನ್ನಡಿಯಂತೆ ನಳನಳಿಸಿ
ಅಮೂರ್ತ ಭಾವತೊಲಗಿಸುತ
ಮೂರ್ತತೆಯೊಳಗೆ ಅದ್ಭುತವಾಗಿ
ನೀ ಬಿಂಬಿತವಾಗಿರಬೇಕು…..

ಧರೆತುಂಬಿ ಹರಿವ ಝರಿ ತೊರೆ
ಹಳ್ಳಗಳಂತೆ ಕಣ್ಮನ ಸೆಳೆದು
ವಿಹಂಗಮ ನೋಟ ಸೃಷ್ಟಿಸುವ
ಹರೆಯದ ತರುಣಿಯಂತೆ
ನೀ ಸಂಪದ್ಭರಿತವಾಗಿರಬೇಕು…

ಬಿಂಕದ ಸಿಂಗಾರಿಯ ನಾಚಿಕೆಯಲಿ
ಸುಳಿದಾಡುವ ಭಾವದೆಳೆಯ
ಉತ್ಕಟ ಅಭೀಪ್ಸೆಗಳ ಸಾಲುಗಳ
ತೋರಣದಂತೆ ಹೃನ್ಮನವ
ಅಪ್ಪಿಕೊಳ್ಳುವಂತಿರಬೇಕು ನೀ ಓ ಕವಿತೆ….

********************

Leave a Reply

Back To Top